ಚಿಬ್ಬಲಗುಡ್ಡೆ

ಚಿಬ್ಬಲಗುಡ್ಡೆಯು ಎಂಬುದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಒಂದು ಪ್ರವಾಸಿ ತಾಣವಾಗಿದೆ. ಇದು ಜಿಲ್ಲೆಯ ಶಿವಮೊಗ್ಗದಿಂದ 70.2 ಕಿ.ಮೀ. ತೀರ್ಥಹಳ್ಳಿಯಿಂದ 09 ಕಿ.ಮೀ ದೂರದಲ್ಲಿದೆ.

ಚಿಬ್ಬಲಗುಡ್ಡೆಯು ಪ್ರಸಿದ್ಧನದಿಯಾದ ತುಂಗಾ ನದಿಯ ತಟದಲ್ಲಿದೆ. ಇಲ್ಲಿ ಶ್ರೀಸಿದ್ಧಿವಿನಾಯಕ ದೇವಾಲಯವಿದೆ. ಅನೇಕ ಋಷಿಮುನಿಗಳ ತಪಸ್ಸಿನಿಂದ ಪುನೀತವಾದ ಈ ಪ್ರದೇಶವು ಇಂದಿಗೂ ವಿಶೇಷ ಮಹತ್ವವನ್ನು ಹೊಂದಿದೆ. ಚಿಬ್ಬು ಅಥವಾ ಸಿಬ್ಬು ರೋಗವಿರುವವರು ಇಲ್ಲಿ ಬಂದು ನದಿಯ ಮೀನುಗಳಿಗೆ ಅಕ್ಕಿ ಅಥವಾ ಮಂಡಕ್ಕಿ ಹಾಕುವೆ, ದೇವರಿಗೆ ಹಣ್ಣುಕಾಯಿ ಮಾಡಿಸುವೆ ಎಂದು ಹರಕೆ ಹೊತ್ತ್ತರೆ ರೋಗ ವಾಸಿಯಾಗುವುದು. ಆದುದರಿಂದಲೆ ಈ ಪ್ರದೇಶಕ್ಕೆ ಚಿಬ್ಬಲಗುಡ್ಡೆ ಎಂದು ಹೆಸರು ಬಂದಿದೆ. ಇಲ್ಲಿನ ನದಿಯ ಮೀನುಗಳನ್ನು ನೋಡುವುದೆ ಒಂದು ಆನಂದ.

ಶೃಂಗೇರಿಯ ಮೂಲಕ ಬರುವ ತುಂಗಾ ನದಿ ತೀರ್ಥಹಳ್ಳಿಯಿಂದ ಚಿಬ್ಬಲಗುಡ್ಡೆಯ ಮೂಲಕ ಮಂಡಗದ್ದೆ ಶಿವಮೊಗ್ಗದತ್ತ ಹರಿಯುತ್ತದೆ. ತೀರ್ಥಹಳ್ಳಿಯಿಂದ ಹೆದ್ದೂರು, ಕಟ್ಟೆಹಕ್ಕಲು ಮಾರ್ಗದಲ್ಲಿ ಸಂಚಾರ ನಡೆಸಿದರೆ ಚಿಬ್ಬಲಗುಡ್ಡೆ ಸಿಗುತ್ತದೆ. ದಬ್ಬಣ್ಣಗದ್ದೆ ಮತ್ತು ನಂಬಳ ಗ್ರಾಮದ ನಡುವೆ ತುಂಗಾ ನದಿಯಲ್ಲಿ ಬಗೆಬಗೆಯ ಮೀನಿನ ರಾಶಿ ಜನರನ್ನು ಸೆಳೆಯುತ್ತದೆ. ಇಲ್ಲಿನ ಶ್ರೀ ಸಿದ್ಧಿವಿನಾಯಕ ದೇವಾಲಯಕ್ಕೆ ಅಪಾರ ಭಕ್ತರಿದ್ದಾರೆ. ಸಂಕಷ್ಟ ಚತುರ್ಥಿಯಂದು ತೀರ್ಥಹಳ್ಳಿ ಮಾತ್ರವಲ್ಲದೇ ಹೊರ ಜಿಲ್ಲೆ, ತಾಲೂಕುಗಳಿಂದಲೂ ಭಕ್ತರು ಆಗಮಿಸುತ್ತಾರೆ.

ತೀರ್ಥಹಳ್ಳಿಯು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ