ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ ಕುಮಾರ್ 1953 ರಲ್ಲಿ ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದ ಹಿಸಾನದಲ್ಲಿ ಜನಿಸಿದರು. ಇವರ ತಂದೆ ರಾಮಣ್ಣ ಗೌಡ ಮತ್ತು ತಾಯಿ ಚಿನ್ನಮ್ಮ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗ್ರಾಮದಲ್ಲಿ ಪಡೆದರು, ಪ್ರೌಢಶಿಕ್ಷಣ ಕೋಣಂದೂರು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದರು. ನಂತರ ಶಿವಮೊಗ್ಗ ಆಚಾರ್ಯ ತುಳಿಸಿ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು.
ನಂತರ ಬಿಜೆಪಿಯ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರೂ ಆಗಿದ್ದರು. ಕಾಲೇಜು ವ್ಯಾಸಾಂಗ ಮಾಡುವಾಗಲೇ 1975ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿ ಜ್ಞಾನೇಂದ್ರ ಜೈಲು ಸೇರಿದ್ದರು.
1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಆರಗ ಜ್ಞಾನೇಂದ್ರ ಸ್ಪರ್ಧಿಸಿದರು. ಆದರೆ ಚೊಚ್ಚಲ ಸ್ಪರ್ಧೆಯಲ್ಲಿ ಅವರಿಗೆ ಸೋಲು ಕಾದಿತ್ತು. 1985, 89ರಲ್ಲಿ ಮತ್ತೆ ಸ್ಪರ್ಧಿಸಿದರಾದರೂ ಗೆಲುವು ಮರೀಚಿಕೆಯಾಗಿಯೇ ಉಳಿಯಿತು.
ನಡುವೆ ಜಿಲ್ಲಾ ಪಂಚಾಯತ್ ಚುನಾವಣೆಗೆ 1986ರಲ್ಲಿ ಆರಗ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಈ ವೇಳೆ ಅವರು ಶಿವಮೊಗ್ಗ ಜಿಲ್ಲಾ ಪರಿಷತ್‌ನ ಕೃಷಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1991ರಲ್ಲಿ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಸೋಲು ಕಂಡ ಆರಗ ಜ್ಞಾನೇಂದ್ರ 1994ರಲ್ಲಿ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದರು. ಬಳಿಕ 1999, 2004ರಲ್ಲೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಸೋಲನ್ನು ಗೆಲುವಾಗಿ ಪರಿವರ್ತಿಸಿಕೊಂಡರು.
ಆದರೆ 2008, 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ಜ್ಞಾನೇಂದ್ರ ಓಟಕ್ಕೆ ಅಡ್ಡಗಾಲು ಹಾಕಿದರು. ಇದರಿಂದ ಒಂದಿಷ್ಟು ಕಾಲ ತೆರೆಮರೆಗೆ ಸರಿದಿದ್ದ ಆರಗ ಜ್ಞಾನೇಂದ್ರ 2018ರ ನಿರ್ಣಾಯಕ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರರು. ಹೀಗೆ 10 ವರ್ಷಗಳ ಬಳಿಕ ವಿಧಾನಸಭೆಗೆ ಬಂದ ಆರಗ ಜ್ಞಾನೇಂದ್ರ ಅವರಿಗೆ ಬಯಸದೇ ಬಂದ ಭಾಗ್ಯ ಎಂಬಂತೆ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದಲ್ಲಿ ಗೃಹ ಖಾತೆಯನ್ನು ನೀಡಿದರು.
ತೀರ್ಥಹಳ್ಳಿಯಲ್ಲಿ ಅಡಿಕೆ ವ್ಯವಹಾರ ನಡೆಸುತ್ತಿರುವ ತೀರ್ಥಹಳ್ಳಿ ಕೃಷಿಕರ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಇವರು, ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ವಿಧಾಸಭೆ ಹಾಗೂ ದಿಲ್ಲಿ ಮಟ್ಟದಲ್ಲಿ ದನಿಯೂ ಎತ್ತಿ, ಒಂದಿಷ್ಟು ಸಮಸ್ಯೆಗಳನ್ನು ಬಗೆಹರಿಸುವಲ್ಲಿಯೂ ಪ್ರಯತ್ನಪಟ್ಟಿದ್ದಾರೆ.
ತೀರ್ಥಹಳ್ಳಿಯು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.